Jain Tombs of Thadagaje
ಜೈನ ಮುಡಿಂಜಗಳೆರಡು ಆಕಾರದಲ್ಲಿ ಸಾಮ್ಯತೆ ಹೊಂದಿದ್ದು ಗಾತ್ರದಲ್ಲಿ ಭಿನ್ನವಾಗಿದೆ. ಭಿನ್ನತೆಯ ಆಧಾದಲ್ಲಿ ಇವುಗಳು ಸ್ತ್ರೀ ಮತ್ತು ಪುರುಷನ ಯಾ ಸಹೋದರರ ಮುಡಿಂಜಗಳೆಂದು ಊಹಿಸಲಾಗಿದೆ.
ಈ ಮುಡಿಂಜಗಳ ಪಶ್ಚಿಮಕ್ಕೆ ಒಂದು ಮಾಡವಿದೆ. ಮಾಡ ಎಂದರೆ ಸವಾರಿಗೆ ಹೋಗುವ ಅರಸು ದೈವಗಳು ದಣಿವಾರಿಸಿಕೊಳ್ಳುವ ಜಾಗ. 'ಮಾಡ' ಎಂಬ ಪದವನ್ನು 'ಮಾಡಂಗೋಲು' ಅಂದರೆ ಗೋಡೆಯಿಲ್ಲದೆ ಕಂಬಗಳ ಆಧಾರದಲ್ಲಿ ರಚಿಸಲ್ಪಡುವ ಕಟ್ಟಡ ಎಂಬ ಪದಕ್ಕೆ ತಾಳೆ ಮಾಡಬಹುದು. ದೈವಸ್ಥಾನದಲ್ಲಿ ದೈವದ ಭಂಡಾರ, ಆಭರಣಗಳಿದ್ದು ಸುತ್ತಲೂ ನಾಲ್ಕು ಗೋಡೆಗಳಿಂದ ಭದ್ರವಾಗಿರುತ್ತದೆ. ಆದರೆ ಮಾಡದಲ್ಲಿ ಯಾವುದೇ ವಸ್ತುಗಳನ್ನು ಇರಿಸಲಾಗುವುದಿಲ್ಲ.
ಚೌಕ ಆಕಾರದ ಕಟ್ಟೆಯ ಮೇಲೆ ನಾಲ್ಕು ಮೂಲೆಗಳಲ್ಲಿ ಕಂಬಗಳನ್ನು ಹೊಂದಿದ್ದು ಮೇಲ್ಛಾವಣಿಯನ್ನು ಹೊಂದಿರುತ್ತದೆ. ಮಾಡಗಳು ತೆರೆದಿದ್ದು ಯಾವುದೇ ಭದ್ರತೆ ಇಲ್ಲದಿರುವುದು ಅಲ್ಲಿ ಭಂಡಾರ ಯಾ ಇನ್ನಿತರ ಪರಿಕರಗಳಾಗಲಿ ಇರುವುದಿಲ್ಲ ಎಂಬುವುದಕ್ಕೆ ಸಾಕ್ಷಿ. ಮಾಡದಲ್ಲಿ ದೈವಸ್ಥಾನದಿಂದ ಭಂಡಾರ ತಂದು ನೇಮ ನಡೆಯುವ ಕ್ರಮವಿದೆ. ಆದರೆ ದೈವಸ್ಥಾನವಿಲ್ಲದೆ ಕೇವಲ ಮಾಡ ಇರಲು ಸಾಧ್ಯವಿಲ್ಲ.
ಸರಳವಾಗಿ ಹೇಳಬೇಕೆಂದರೆ ಒಂದು BUS STAND ಮತ್ತು BUS STOPಗೆ ಇರುವ ವ್ಯತ್ಯಾಸ ದೈವಸ್ಥಾನ ಮತ್ತು ಮಾಡಕ್ಕೆ ಇದೆ. ಹಿಂದೆ ಜೈನ ಅರಸರ ಸಮಾಧಿಯ ಪಕ್ಕದಲ್ಲಿ ಅವರು ಆರಾಧಿಸುತ್ತಿದ್ದ ದೈವದ ಮಾಡವನ್ನು ನಿರ್ಮಿಸಲಾಗುತ್ತಿತ್ತು. ಸವಾರಿಗೆ ಹೋಗುವ ವಿಚಾರ ಕೇವಲ ಅರಸು ದೈವಗಳಿಗೆ ಸಂಬAಧಿಸಿದಾಗಿದೆ. ಅರಸು ದೈವ ಯಾ ಉಚ್ಛ ದೈವಗಳ ಭಂಡಾರದಲ್ಲಿ ಒಂದು ಕುದುರೆ ಸವಾರಿ ಮಾಡುವ ಮೂರ್ತಿ ಇರುತ್ತದೆ. ಇದು ಆ ದೈವವು ಸವಾರಿ ಹೋಗುವ ದೈವವಾಗಿದೆ ಎನ್ನುವುದನದನ್ನು ಸೂಚಿಸುತ್ತದೆ. ಇಂತಹ ದೈವಗಳು ಗುರಾಣಿಯನ್ನು ಹೊಂದಿದ್ದು ಉಳಿದ ದೈವದ ಆಯುಧಕ್ಕಿಂತ ಭಿನ್ನವಾಗಿರುತ್ತದೆ. ಕೆಲವು ಮನೆತನಗಳಲ್ಲಿ ಶಾಶ್ವತವಾದ ಮಾಡಗಳು ಇಲ್ಲದಿದ್ದು ನೇಮದ ಸಂದರ್ಭದಲ್ಲಿ ತಾತ್ಕಾಲಿಕ ಮಾಡವನ್ನು ನಿರ್ಮಿಸಲಾಗುತ್ತದೆ. ನರ್ತನದ ನಂತರ ದೈವವು ಮಾಡಕ್ಕೆ ಒರಗೆ ದಣಿವಾರಿಸಿಕೊಳ್ಳುವ ಸುಂದರ ದೃಶ್ಯವನ್ನು ಬೆಳ್ಳಾರೆಯಿಂದ 4.6KM ದೂರವಿರುವ ಬಜನಿಯ ಉಳ್ಳಾಕುಲು ನೇಮದಲ್ಲಿ ನೋಡಬಹುದು. ಇಂದು ಅನೇಕ ಶಾಶ್ವತ ಮಾಡಗಳು ದ್ರಾವಿಡ ತುಳುಸಂಸ್ಕೃತಿಯ ಮೂಲಜ್ಞಾನ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿಯೋ ಅಥವಾ ಬ್ರಾಹ್ಮಣ ಜ್ಯೋತಿಷಿಗಳು ಹೇಳಿದ್ದನ್ನೆಲ್ಲಾ ನಂಬುವ ಮೂರ್ಖಸಮಾಜರಿಂದಾಗಿಯೋ, ಭಂಡಾರವನ್ನಿಟ್ಟು ದೈವಸ್ಥಾನಗಳನ್ನಾಗಿ ಪರಿವರ್ತಿಸಲಾಗಿದೆ.
ಇಲ್ಲಿರುವ ಮಾಡದ ಕಟ್ಟೆಯ ಕಲ್ಲುಗಳ ಆಯಸ್ಸು ಮುಡಿಂಜಗಳ ಕಲ್ಲಿನ ಆಯಸ್ಸಿಗೆ ತಾಳೆಯಾಗುತ್ತಿದ್ದರೆ CEMENT ಬಳಸಿ ನಿರ್ಮಿಸಿದ ಕಂಬಗಳು ಮತ್ತು ಮೇಲ್ಛಾವಣಿ ಇತ್ತೀಚಿನದಾಗಿವೆ.
ಪ್ರಾಯಶಃ ನಂತರದ ವರುಷಗಳಲ್ಲಿ ಕಂಬಗಳು ಜೀರ್ಣವಾಗಿ ನವೀಕರಿಸಲ್ಪಟ್ಟಿರಬಹುದು ಮತ್ತು ನಿರ್ದಿಷ್ಟ ವರ್ಷಗಳಿಗೊಮ್ಮೆ ಮೇಲ್ಛಾವಣಿಯನ್ನು ನವೀಕರಿಸುವುದು ಸಾಮಾನ್ಯವಾದ ವಿಚಾರ. ಬೈಲಿನಲ್ಲಿ ಈಗಲೂ ಉಳ್ಳಾಕುಲು ಆರಾಧನೆ ಇರುವುದರಿಂದ ಮತ್ತು ಬೇರೆ ಯಾವುದೇ ಅರಸು ದೈವಗಳ ಆರಾಧನೆ ಇಲ್ಲದಿರುವುದರಿಂದ ಆ ಮಾಡವು ಅದೇ ದೈವಗಳದ್ದೆಂದು ಹೇಳಬಹುದು. ಮೇಲ್ಛಾವಣಿಯಲ್ಲಿ ಕಲಶ ಇಲ್ಲದಿರುವುದು ಹಿಂದಿನ ನವೀಕರಣವು ಸುಮಾರು ಐವತ್ತು ವರುಷಗಳ ಮುಂಚೆಯೇ, ಅಂದರೆ ತೌಳವ ಸಂಸ್ಕೃತಿಗಳ ಮೇಲೆ ಬ್ರಾಹ್ಮಣರು ಪ್ರಾಬಲ್ಯ ಸಾಧಿಸುವುದಕ್ಕೆ ಮೊದಲೇ ನಡೆದಿದೆ ಎಂದು ಹೇಳಬಹುದು. ಹಿಂದೆ ಜೈನ ಅರಸರ ಆಳ್ವಿಕೆಯ ಕಾಲದಲ್ಲಿ ಅರಸರು ಆರಾಧಿಸುತ್ತಿದ್ದ ದೈವಗಳನ್ನು ಅರಸು ದೈವಗಳು ಎನ್ನುತ್ತಾರೆ. ಉದಾಹರಣೆಗೆ ಉಳ್ಳಾಕುಲು, ಕಿನ್ನಿಮಾಣಿ-ಪೂಮಾಣಿ,ಅಡ್ಯಂತಾಯ... ಇತ್ಯಾದಿ. ಉಳಿದ ದೈವಗಳ ಇದೇ ಕ್ರಮವನ್ನು ಸವಾರಿ ಎನ್ನಲಾಗುವುದಿಲ್ಲ ಬದಲಾಗಿ 'ಕಡಪ್ಪು'(ಅಡ್ಡಾಡುವುದು)ಎನ್ನುತ್ತಾರೆ.
ಮುಡಿಂಜಗಳು ಮತ್ತು ಮಾಡದ ನಡುವೆ 4 - 5 ನಾಗನ ಬಿಂಬಗಳಿರುವ ಕಲ್ಲುಗಳಿವೆ. ಇವುಗಳು ಒಂದೇ ಬಾರಿ ಇರಿಸಿದ ಕಲ್ಲುಗಳಾಗಿಲ್ಲ. ಸವೆತದ ಪ್ರಮಾಣದಲ್ಲಿ ಒಂದಕ್ಕೊಂದು ಭಿನ್ನವಾಗಿವೆ.
ಇವುಗಳಿಗೆ ಮತ್ತು ಈ ಜೈನ ರಚನೆಗಳಿಗೆ ಯಾವುದೇ ಸಂಬಂಧ ಕಂಡುಬರುವುದಿಲ್ಲ. ಏಕೆಂದರೆ ಜೈನರ ಕಾಲದ ನಾಗನ ಕಲ್ಲುಗಳಲ್ಲಿ ನಾಗನ ಬಿಂಬವಿರುವುದಿಲ್ಲ ಮತ್ತು ಸಾಮಾನ್ಯ ಚಹರೆ ಹೊಂದಿರುತ್ತದೆ ಇತಿಹಾಸಕಾರರು ಹೇಳುತ್ತಾರೆ. ಇವುಗಳನ್ನು ಇಲ್ಲಿ ನಂತರದ ವರುಷಗಳಲ್ಲಿ ವಾಸವಿದ್ದವರು ಇರಿಸಿದರು ಎಂದೂ ಹೇಳಲಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಅಂತಹ ಜೀರ್ಣವಾದ ಮನೆಯ ಕುರುಹುಗಳು ಕಂಡುಬರುವುದಿಲ್ಲ. ಈ ಭಾಗದಲ್ಲಿರುವ ಮನೆಗಳು ಇತ್ತೀಚಿನದಾಗಿವೆ. ಈ ಪ್ರದೇಶವು 'ತೆಂಕಾಯಿ ದೊಂಬು'(ದಕ್ಷಿಣಾಯನದ ಬಿಸಿಲು) ಬೀಳುವ ಪ್ರದೇಶವಾಗಿದ್ದು ಭೌಗೋಳಿಕವಾಗಿ ವಾಸಕ್ಕೆ ಯೋಗ್ಯವಾಗಿರುವುದಿಲ್ಲ ಮತ್ತು ಇಂತಹ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಮನೆ ನಿರ್ಮಿಸುವು ಕಷ್ಟಸಾಧ್ಯವಾಗಿರುತ್ತದೆ. ಈ ಪ್ರದೇಶ ಉದ್ದಕ್ಕೂ ಸಮಾದಿಗಳು ಇವೆ ಮತ್ತು ಈ ಹಿಂದೆ ಉತ್ಖನನ ಸಂದರ್ಭದಲ್ಲಿ ಕಳೇಬರಗಳು ದೊರಕಿದ್ದವು. ಪ್ರಸ್ತುತವಾಗಿ ಆಧುನಿಕ ನೀರಿನ ಮೂಲಗಳಿಂದ ವಾಸ ಮತ್ತು ಕೃಷಿ ನಡೆಯುತ್ತಿದ್ದರೂ ಹಿಂದೆ ಇಂತಹ ಭಾಗದಲ್ಲಿ ಭೂಮಿಯನ್ನು ಕೃಷಿಗೂ ಬಳಸಲಾಗುತ್ತಿರಲಿಲ್ಲ.
ಹಿಂದೆ ಸುಬ್ರಹ್ಮಣ್ಯಕ್ಕೆ ಹೋಗಲು ಅಶಕ್ತವಾಗಿದ್ದವರು ನಾಗಹತ್ಯೆ ಯಾ ಇತರ ದೋಷಪರಿಹಾರಕ್ಕಾಗಿ ಹೊಸದಾದ ಬಿಂಬಗಳನ್ನು ಇರಿಸಿ ಹಾಲೆರೆದು ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ವರ್ಷಂಪ್ರತಿ ಬಲಿಪಾಡ್ಯ ಮತ್ತು ಬಿಸುವಿನಂದು ಮುಡಿಂಜ ಮತ್ತು ಮಾಡಗಳಲ್ಲಿ ವೈದಿಕ ವಿಧಾನದಲ್ಲಿ ಆರಾಧನೆ ನಡೆಯುತ್ತಿದೆ. ಇಲ್ಲಿ ಮುಡಿಂಜಗಳ ಆರಾಧನೆ, ಹಿಂದೆ ಜನರು ಅರಸರ ಮರಣದ ನಂತರವೂ ಅವರನ್ನು ಪೂಜಿಸುತ್ತಿದ್ದರು ಮತ್ತು ಆ ಅರಸನ ಕಾಲದಲ್ಲಿ ಜನರಿಗೆ ಒದಗಿದ್ದ ಸುಖಜೀವನವನ್ನು ಪ್ರತಿನಿಧಿಸುತ್ತದೆ. ತುಳುನಾಡು ಮತ್ತು ಉತ್ತರ ಮಲಬಾರ್ ಪ್ರದೇಶಗಳಲ್ಲಿ ಮಾನವರು ದೈವತ್ವವನ್ನು ಪಡೆದು ಇಂದಿಗೂ ಆರಾಧಿಸಲ್ಪಡುತ್ತಿರುವ ಅನೇಕ ನಿದರ್ಶನಗಳಲ್ಲಿ ಇದೂ ಒಂದಾಗಿದೆ.
ಜೈನ ಅರಸರ ವಾಸ್ತುಶಿಲ್ಪ ಮತ್ತು ನೆನಪಿಗೆ ಸಾಕ್ಷಿಯಾಗಬೇಕಿದ್ದ ಈ ಮುಡಿಂಜಗಳು ಇಂದು ವೈದಿಕರ ಉದ್ಯಮದ ಬಲಿಪಶುವಾಗಿದೆ. ಕಳೆದ ವರುಷದಲ್ಲಿ ಇಲ್ಲಿ ಎರಡು ಪ್ರತ್ಯೇಕ ಜ್ಯೋತಿಷಿಗಳಿಂದ ಜ್ಯೋತಿಷ್ಯ ಚಿಂತನೆ ನಡೆದಿದ್ದು ಗೋರಿಗಳನ್ನು ದೈವದ ಕಟ್ಟೆಗಳು ಎಂದು ನಂಬಿಸಲಾಗಿದೆ! ವೈದಿಕರ ತಾಳಕ್ಕೆ ಕುಣಿಯುವ ಮತ್ತು ಅವರು ಹೇಳಿದನ್ನು ನಂಬುವ ಜನರಿಂದ ಈ ಪುರಾತನ ಮುಡಿಂಜಗಳನ್ನು ರಕ್ಷಿಸಬೇಕಿದೆ. ಜೀರ್ಣಗೊಂಡ ರಚನೆಗಳನ್ನು ಇದ್ದಂತೆಯೇ ನವೀಕರಿಸಬಹುದೇ ಹೊರತು ಆ ವಾಸ್ತವ್ಯವನ್ನೇ ಬದಲಿಸುವ ಹಕ್ಕು ಯಾರಿಗೂ ಇಲ್ಲ ಮತ್ತು ಹಾಸ್ಯಾಸ್ಪದ. ಓರ್ವ ಜ್ಯೋತಿಷಿಯು ದೊಡ್ಡ ಗಾತ್ರದ ಗೋರಿಯನ್ನು 'ರಕ್ತೇಶ್ವರಿಯ ಕಟ್ಟೆ' ಎಂದದ್ದು ಬಹುಶಃ ಕಲಿಯುಗದ ಹಾಸ್ಯವಾದೀತು. ಒಟ್ಟಿನಲ್ಲಿ ಗೋರಿಗಳನ್ನು ದೈವದ ಕಟ್ಟೆಗಳು ಎಂದು ನಂಬಿಸಿ ವ್ಯಾಪಾರ ಪ್ರಾರಂಭಿಸಲಿರುವವರ ಮಧ್ಯೆ ಆ ಜಾಗದ ನಿವಾಸಿಗಳು ಮತ್ತು ಬೈಲಿನ ಜನರು, ಮುಂದೆ ನಡೆಯಬೇಕೆನ್ನುವ ವೈದಿಕ ಕಾರ್ಯಗಳಿಗೆ ಹಣ ಹೊಂದಿಸುವ ಭಾರವನ್ನು ಹೊತ್ತುಕೊಂಡಿದ್ದಾರೆ. ಉಳಿದ ವಿಷಯಗಳಲ್ಲಿ, ಕಷ್ಟಪಟ್ಟು ದುಡಿದ ಹಣವನ್ನು ಭಾರೀ ಜಾಗರೂಕತೆಯಿಂದ ವ್ಯಯಿಸುವ ಜನರು, ಹೀರೆಕಾಯಿ ಕೊಳ್ಳುವಾಗ ಮುರಿದು ನೋಡುವ ಜನರು, ನಂಬಿಕೆಯನ್ನೇ ಬಂಡವಾಳವನ್ನಾಗಿಸಿ ನಡೆಸುವ ಇಂತಹ ಮೋಸಗಳಿಗೆ ಯಾಕೆ ಬಲಿಯಾಗುತ್ತಾರೆಂದು ಮಾಡದಲ್ಲಿ ವಿರಮಿಸುವವರಿಗೆಯೇ ಗೊತ್ತು.






👌👌
ReplyDelete