TADIANDAMOL
ಮಡಿಕೇರಿಯಲ್ಲಿ ಅನ್ಯ ಸಹಪಾಠಿಯಬ್ಬಳ ಸಹೋದರಿಯ ಮದುವೆ ಮುಗಿಸಿಕೊಂಡು ಅವಳನ್ನು ಆಕೆಯ ಮನೆಗೆ ತಲುಪಿಸಲು ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಇಕ್ಕಟ್ಟಿನ ದಾರಿ, ಕಾಫಿ ತೋಟಗಳನ್ನು ಸೀಳಿ ಗಗನಚುಂಬಿ ಸಿಲ್ವರ್ ಮರಗಳ ಮಧ್ಯೆ ಹಾದುಹೋಗಿತ್ತು. ಮಧ್ಯದಲ್ಲಿ ಕಟಾವಾದ ಸಿಲ್ವರ್ ಮರಗಳನ್ನು ತುಂಬಿದ ಟ್ರಾಕ್ಟರ್, ಕೆಸರು ಮಣ್ಣಿನಲ್ಲಿ ಪರದಾಡುತ್ತಾ, ಇನ್ನೊಂದು ಟ್ರಾಕ್ಟರ್‌ಗೆ ಕಟ್ಟಿ ಎಳೆಸಿಕೊಳ್ಳುತ್ತಿದ್ದ ದೃಶ್ಯ ನನಗೆ ಈಗಲೂ ನೆನಪಿದೆ. ಅವಳ ಮನೆ ತಲುಪಿ ಕಾಫಿ ಕುಡಿದ ನಂತರ ಹಿಂದಿನ ಅಂಗಳಕ್ಕೆ ಕರೆದು, ಅರೆ-ಬರೆ ಒದ್ದೆಯಾದ ಕಟ್ಟಿಗೆಯ ರಾಶಿಯ ನೇರ ಮೇಲಕ್ಕೆ ಕೈತೋರಿಸಿ ದೂರದ ಬೆಟ್ಟವನ್ನು ತೋರಿಸಿದಳು. ಮೋಡಗಳ ನಡುವೆ ಆ ಬೆಟ್ಟ ಮಬ್ಬಾಗಿ ಕಾಣುತ್ತಿದ್ದರಿಂದ ತಾರಸಿಗೆ ಹತ್ತಿ ಸುಧಾರಿಸಿದ ನೋಟಕ್ಕಾಗಿ ಪ್ರಯತ್ನಿಸಿದೆವು. ನೋಟ ಸುಧಾರಿಸದಿದ್ದರೂ, ತಾರಸಿ ಕಂಡೊಡನೆ ಮೇಲಿನಿಂದ ಕಾಣುವ ಕಾಫಿ ತೋಟದ ದೃಶ್ಯ, ಲಾಕ್ ಡೌನ್ ಸಮಯದಲ್ಲಿ ನಡೆದ ಕೆಲವು ಸ್ಪರ್ಧೆಗಳು ನೆನಪಿಗೆ ಬಂದವು. ಅವುಗಳಲ್ಲಿ ಒಂಟಿ ನೃತ್ಯವೂ ಒಂದು. ಸ್ಫರ್ಧೆ ಓನ್-ಲೈನ್ ಆಗಿದ್ದರಿಂದ ಕೆಲವು ಮನೆಗಳ ತಾರಸಿಯನ್ನು ನೋಡುವ ಭಾಗ್ಯ ನಮ್ಮದಾಗಿತ್ತು!
ನಂತರ ಅಲ್ಲೇನೂ ನಮಗೆ ಸಮಯವಿರಲಿಲ್ಲ. ನಾವು ನಮ್ಮ ಊರಿನತ್ತ ಪ್ರಯಾಣ ಬೆಳೆಸಿದೆವು. ಮುಂದಿನ ಕೆಳದಿನಗಳಲ್ಲಿ ಅವಳ ತಾಯಿ,"ಮನೆಗೆ ಬಂದ ನೆಂಟರು 'ಅಕ್ಕಿ-ರೊಟ್ಟಿ'ಯನ್ನೂ ತಿನ್ನದೆ ಹಾಗೆಯೇ ಹೋದರಲ್ಲಾ" ಎಂದು ಗೊಣಗಿತ್ತಿದ್ದರಂತೆ. ಹೇಗೂ ಕೆಲವು ವಾರಗಳ ನಂತರ 'ಅಕ್ಕಿ-ರೊಟ್ಟಿ' ತಿನ್ನಲು 22-10-2022ರ ಸಂಜೆಯ ಮುಹೂರ್ತ ನಿಗದಿಪಡಿಸಿದೆವು! ಪುತ್ತೂರಿನಿಂದ ಸಂಜೆಯ ಸಮಯಕ್ಕೆ, ಕೊಯಮತ್ತೂರಿಗೆ ಮೈಸೂರು ಮಾರ್ಗವಾಗಿ ಸಾಗುವ ಐರಾವತ ಬಸ್ ಒಂದಿದೆ. ಬಸ್ ಅಷ್ಟೊಂದು ನಿಬಿಡವಾಗಿ ಇರಲಿಕ್ಕಿಲ್ಲ ಮತ್ತು ಸೀಟು ಕೂಡ ಇರಬಹುದು! ಎಂಬ ಉಡಾಫೆ ಯೋಚನೆಯಿಂದ ನಾವು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿರಲಿಲ್ಲ. ದೂರದ ಪ್ರಯಾಣವಾಘಿದ್ದರಿಂದ ಕೊಂಚ ಸುವಿಧತೆಯೊಂದಿಗೆ ಕಾಡುದಾರಿಯಲ್ಲಿ ಆನಂದಿಸಬಹುದು ಎಂಬುದು ನಮ್ಮ ಆಲೋಚನೆ. ಅವಿನಾಶ್ ಮತ್ತು ಕೌಶಿಕ್ ಪುತ್ತೂರಿನಿಂದ ಹತ್ತಿದರೆ, ನಾನು, ಪ್ರಸಾದ ಮತ್ತು ರಕ್ಷಿತ್ ಸುಳ್ಯದಿಂದ ಹತ್ತುವುದಾಗಿ ಯೋಜನೆ ಹಾಕಿದೆವು. ಸಮಯಕ್ಕೆ ಸರಿಯಾಗಿ ಆ ಬಸ್ ಪುತ್ತೂರಿಗೆ ತಲುಪಿರಲಿಲ್ಲ. ತಡವಾಗಿ ಬಂತಾದರೂ, ವಿಪರ್ಯಾಸವೆಂದರೆ ಪುತ್ತೂರಿನಲ್ಲಿ ಆ ಬಸ್ ಗೆ ಕಾಲಿಡಲೂ ಕೂಡ ಜಾಗವಿರಲಿಲ್ಲ ಎಂದು ಕೌಶಿಕ್ ಹೇಳಿದಾಗ ನಮ್ಮ ಎಲ್ಲಾ ಯೋಜನೆಗಳನ್ನು ಕೈಬಿಡಬೇಕೋ ಏನೋ ಎನ್ನುವ ಆತಂಕ ಶುರುವಾಗಿತ್ತು. ನಂತರ ಅದರ ನಂತರ ಬರುವ ಯಾವುದಾದರು 'ಕೆಂಪು' ಬಸ್ ನಲ್ಲಿ ಬರುವುದಾಗಿ ತಿಳಿಸಿದ. ಇವರಿಗಾಗಿ ಕಾದು ಕಾದು ಸುಸ್ತಾದ ನಾನು ಮತ್ತು ರಕ್ಷಿತ್ ಸುಳ್ಯದ ಎರಡೂ ಬಸ್ ನಿಲ್ದಾಣಗಳನ್ನು ಸುತ್ತಾಡಿ ಹಲವು ಗೋಬಿ ಮತ್ತು ಪಾನಿಪೂರಿ ಅಂಗಡಿಗೆ ಮುಖತೋರಿಸಿಬಿಟ್ಟಿದ್ದೆವು! ಕೊನೆಗೂ ನಮ್ಮವರು ಹತ್ತಿದ ಕೆಂಪು ಬಸ್ ಸುಳ್ಯ ತಲುಪಿತು. ಪರೀಕ್ಷಾ ಕೊಠಡಿಯಲ್ಲಿ ಒಬ್ಬರ ಮುಖ ಇನ್ನಬ್ಬರು ನೋಡಿ ನಗುವಂತಹ ನಗು ಬೀರಿದೆವು. ಕೊಂಚ ದೂರ ಸಾಗಿದ ಮೇಲೆ ಎಲ್ಲರಿಗೂ ಹಿಂದಿನ ಸಾಲಿನಲ್ಲಿ ಸೀಟು ಸಿಕ್ಕಿತು. ಒಂದು ಈಯರ್ ಫೋನಿನಲ್ಲಿ ಇಬ್ಬರು ಹಾಡು ಕೇಳುತ್ತಾ ಮಡಿಕೇರಿ ತಲುಪಿದೆವು. ಮಡಿಕೇರಿಯಲ್ಲಿ ಮಳೆಸುರಿಯುತ್ತಿತ್ತು, ಸ್ವಲ್ಪ ಹೊತ್ತು ಕಾದಾಗ ಶ್ರವಣ್ ಕಾರಿನಲ್ಲಿ ನಮ್ಮನ್ನು ವಿರಾಜಪೇಟೆ ರಸ್ತೆಯಲ್ಲಿರುವ ರೆಸೋರ್ಟಗೆ ಕರೆದೊಯ್ಯಲು ಬಂದ.
ರೆಸೋರ್ಟನಲ್ಲಿ ಬೆಳಗ್ಗೆ ಉಪಹಾರ ಮುಗಿಸಿ ಅರಸಿ ಬಂದ ಬೆಟ್ಟದ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯ ಮಧ್ಯೆ ಆಕೆ, ತಂಗಿ ಮತ್ತು ಪೋಷಕರೊಬ್ಬರ ಜೊತೆ ನಮ್ಮನ್ನು ಸಂಧಿಸಬೇಕಾಗಿದ್ದರಿಂದ ಮಧ್ಯೆ ಕಾರು ನಿಲ್ಲಿಸಬೇಕಾಯಿತು. ಕಾರಲ್ಲಿ ಕೂತು ಏನು ಮಾಡುವುದೆಂದು ನಾನು ಮತ್ತು ಪ್ರಸಾದ ಅಡಿಕೆ ತೋಟದ ಬದಿಯ ದಾರಿಯಲ್ಲಿ ಹೆಜ್ಜೆಹಾಕಲು ಪ್ರಾರಂಭಿಸಿದೆವು.
ಅಡಿಕೆ ಮರಗಳ ಎಡೆಯಿಂದ ಮುಂಜಾನೆಯ ಸೂರ್ಯನ ಕಿರಣಗಳು ಸೋಸಿದ ನಂತರ ಭೂಮಿಯನ್ನು ಸ್ಪರ್ಶಿಸುತ್ತಿವೆಯೋ ಎಂಬಂತೆ ರಮಣೀಯವಾಗಿ ಕಾಣುತ್ತಿತ್ತು. ಒಂದಿಷ್ಟು ನೂರು ಮೀಟರ್ ನಡೆದೊಡನೆ ಅವಳ ಪುಟ್ಟ ತಂಡ ನಮ್ಮನ್ನು ಸೇರಿತು.
ಅವರ ಕಾರನ್ನು ಹಿಂಬಾಲಿಸುತ್ತಾ ಒಂದು ಹಳ್ಳಿಯ ಶಾಲೆಯ ಮೈದಾನವನ್ನು ತಲುಪಿದೆವು. ಅವಳ ಜೊತೆ ಬಂದ ಪೋಷಕರಿಗೆ ಅವಳು ನಮ್ಮನ್ನು ಪರಿಚಯಿಸಿದಳು. ಮೈದಾನದ ಪಕ್ಕದಲ್ಲೇ ನಾವು ಕಾಣಲಿದ್ದ ಎರಡನೆಯ ಜಾಗವಿತ್ತು! ಎಲ್ಲರೂ ತಯಾರಾಗಿ, ನೀರಿನ ಬಾಟಲಿಗಳನ್ನು ಚೀಲಗಳಿಗೆ ತುಂಬಿಸಿಕೊಂಡು ಜೀಪ್ ಹತ್ತಿದೆವು. ಕಾಡಿನ ಅರೆ-ಬರೆ ದಾರಿಯಲ್ಲೆ ಜೀಪಿನ ಪ್ರಯಾಣ ನಮ್ಮ ಮೊದಲ ಕೋಳಿಕಮಲೆ ಚಾರಣವನ್ನು ನೆನಪಿಸುತ್ತಿತ್ತು. ಚಾರಣದ ಗೇಟ್ ತಲುಪಿದ ತಕ್ಷಣ ಉತ್ಸಾಹದಿಂದ ಇಳಿದು ಟಿಕೆಟ್ ಖರೀದಿಸಿದೆವು.
ಅಲ್ಲಿಂದ ನಮ್ಮ ಚಾರಣ ಕಾನೂನಾತ್ಮಕವಾಗಿ ಪ್ರಾರಂಭವಾಯಿತು.ಮೊದಲ ಕೆಲ ದೂರದಲ್ಲಿ ದಾರಿಯು ಸಮತಟ್ಟಾಗಿತ್ತು ಮತ್ತು ಯಾವುದೇ ಹತ್ತುವ ಯಾ ಇಳಿಯುವ ಪ್ರಸಂಗ ಇರಲಿಲ್ಲ. ಸಣ್ಣ ತೊರೆಗಳಲ್ಲಿ ಮೀನುಗಳನ್ನು ಕಾಣುತ್ತಾ ಆನಂದದ ಹೆಜ್ಜೆಹಾಕಿದೆವು. ಅವಳ ಜೊತೆಬಂದ ಪೋಷಕರು ನಮ್ಮಗೆ ಆ ಪರಿಸರ ಮತ್ತು ಸಂಸ್ಕೃತಿಯ ಅಮೂಲ್ಯ ಮಾಹಿತಿಯನ್ನು ನೀಡುತ್ತಾ ನಡಿಗೆಯ ಆಯಾಸವನ್ನು ಮಾಸುತ್ತಿದ್ದರು. ಆ ಹೊತ್ತಿಗೆ ಅಲ್ಲಿ ಯಾರೂ ಇತರ ಪ್ರವಾಸಿಗರು ಇರಲಿಲ್ಲ, ಜಾಗ ಯಾವುದೇ ಇರಲಿ, ನಮಗಲ್ಲಿ ಸಮಯ ಕಳೆಯಲು ಗೌಪ್ಯತೆ ಇರುವುದು ಯಾತ್ರೆಯ ಸ್ಥಳದ ಅತೀ ಮುಖ್ಯ ವಿಚಾರ. ಗೌಪ್ಯತೆ ಇರುವ ಜಾಗದಲ್ಲಿ ಮಾತ್ರ ನಾವು ಮನಬಿಚ್ಚಿ ಆನಂದಿಸಬಹುದೆಂಬುದು ನನ್ನ ಅನಿಸಿಕೆ ಮತ್ತು ಆದ್ಯತೆ ಕೂಡ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ನಡೆದಷ್ಟು ತಲುಪುತ್ತಿರಲಿಲ್ಲ.
ಕೆಲ ತುದಿಗಳನ್ನು ತಲುಪಿದ ಕೂಡಲೆ ಕೂತು, ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದೆವು. ಮತ್ತೆ ದಾರಿಯ ಮಧ್ಯೆ ಊಹೆಯೂ ಮಾಡದಂತಹ ದಟ್ಟಕಾಡಿನ ದಾರಿಯೊಂದಿತ್ತು.
ಎಲ್ಲಾ ಹಾವಸೆ ಹಿಡಿದ ಮರಗಳು. ಕೀಟಗಳ ಸದ್ದು ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ. ಸೂರ್ಯನ ಬೆಳಕು ದಾರಿಗೆ ನಡೆಯಲು ತಕ್ಕವೆಂಬಂತೆ ಬೀಳುತ್ತಿತ್ತು.
ಅದರಿಂದ ಹೊರ ಬಂದ ಮೇಲೆ ಮತ್ತೆ ಹತ್ತಲು ಹುಲ್ಲುಗಾವಲಿನ ದಾರಿ.

ಕೊನೇಯ ದೂರವಂತು ಹೆಚ್ಚು ಇಳಿಜಾರಾಗಿತ್ತು.
ತಾ ಮುಂದು ನಾ ಮುಂದು ಎಂದು ತುದಿ ತಲುಪಲು ಎಲ್ಲಾ ಉತ್ಸುಕರಾಗಿದ್ದೆವು. ಅಂತೂ ಇಂತು ತುದಿ ತಲುಪಿ ಸಮುದ್ರದಿಂದ ಬೀಸುವ ಗಾಳಿಗೆ ಕೈ ಅಗಲಿಸಿ ನಿಂತು ಮೈಯೊಡ್ಡಿದಾಗ ಸಿಗುವ ಸುಖ, ವರ್ಣಿಸಲಸಾಧ್ಯ! ಏರುವಾಗ ಹಸಿವುದ್ದರೂ, ದಣಿವಿದ್ದರೂ ನಮ್ಮೊಳಗಿನ ಉತ್ಸಾಹ ಅದನ್ನು ಮರೆಮಾಚುತ್ತದೆ. ಆದರೆ ಇಳಿಯುವಾಗ ಯಾವುದೇ ಯಾತ್ರಿಕರು ಉತ್ಸಾಹಿಗಳಾಗಿರುವುದಿಲ್ಲ. ಬಳಲಿರುತ್ತಾರೆ, ಇಳಿಯಬೇಕಲ್ಲಾ ಎನ್ನುವ ಭಾವನೆ. ಅಲ್ಲೇ ಮಲಗಿ ಆ ದಿನ ಕಳೆದರಾಯಿತು ಅನ್ನುವಷ್ಟು ಸುಸ್ತಿರುತ್ತದೆ. ಅಂತಹ ಸಂಧರ್ಭದಲ್ಲಿ ಅವಳು ದಾಳಿಂಬೆ ಬೀಜಗಳಿದ್ದ ಪೊಟ್ಟಣ ತೆರೆದದ್ದು ನಮ್ಮ ಪಾಲಿನ ಪುಣ್ಯವೇ ಸರಿ!

ಹಿಂತಿರುಗಿ ಬರುವಾಗ ದಾರಿಯುದ್ದಕ್ಕೂ ಯಾತ್ರಿಕರು ಸಿಗುತ್ತಿದ್ದರು.
ನಾವು ಬೇಗನೆ ಬಂದಿದ್ದರಿಂದ ನಮ್ಮ ಗೌಪ್ಯತೆಯನ್ನು ಅವರಿಗೆ ಕಿತ್ತುಕೊಳ್ಳಲಾಗಲಿಲ್ಲ! ಗೇಟಿನಿಂದ ಕೆಳಗೂ ನಾವು ನಡೆದೇ ನಮ್ಮ ಕಾರು ನಿಲ್ಲಿಸಿದ್ದ ಅಂಗಳಕ್ಕೆ ಹೆಜ್ಜೆಹಾಕಿದೆವು. ಅವಳು ಬಂದ ಕಾರಿನ ಡಿಕ್ಕಿಯಲ್ಲಿ ಉಪಹಾರ ಧಣಿದ ನಮಗಾಗಿ ಕಾಯುತ್ತಿತ್ತು. ಸಾಕಷ್ಟು ಬಡಿಸಿಕೊಂಡು ಒಣೆಲೆಗಳನ್ನು ಇಂಬಳಗಳು ಇವೆಯೋ ಎಲ್ಲವೋ ಎಂದು ಕೆದಕುತ್ತಾ, ಕುಳಿದು ಉಂಡೆವು. ಅವಳ ತಾಯಿಯ ಕೈ ರುಚಿ, ಕೊನೆಗೆ ಪಾತ್ರೆಯನ್ನು ಮಾತ್ರವೇ ಉಳಿಸುವಂತೆ ಖಚಿತಪಡಿಸಿತು. ನಂತರ ನಾವು ಹೆಜ್ಜೆಹಾಕಿದ್ದು ನಾನು ಆಗ ಹೇಳಿದ ಎರಡನೆಯ ಜಾಗಕ್ಕೆ. ಕೊಡವ ದೊರೆ ಚಿಕ್ಕವೀರರಾಜೇಂದ್ರನನ್ನು ಬ್ರಿಟಿಷರು ಬಂಧಿಸಿದ ನಂತರ ಆತನನ್ನು ಒಂದು ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಿದ್ದರು. ಅದುವೇ 'ನಾಲ್ಕನಾಡ್ ಅರಮನೆ'. ತಡಿಯಂಡಮೋಲ್ ಯಾತ್ರಿಕರು ಈ ಜಾಗವನ್ನು ಕಾಣದೆ ಬರಲಾರರು, ಏಕೆಂದರೆ ಇವೆರಡಕ್ಕೂ ಒಂದೇ ಬಾರಿ ಕಾರ್ ನಿಲ್ಲಿಸಿದರೆ ಸಾಕು!
ಅರಮನೆ ಎರಡು ಮಾಳಿಗೆಯಾಗಿತ್ತು. ನಾವು ಹೋದ ಸಮಯದಲ್ಲಿ ಅದು ನವೀಕರಣಗೊಳ್ಳುತ್ತಿದ್ದರಿಂದ ಅಷ್ಟಾಗಿ ಸುಂದರವಾಗಿ ಕಾಣುತ್ತಿರಲಿಲ್ಲವಾದರೂ ಅದರ ವಾಸ್ತುಶಿಲ್ಪ ಅಚ್ಚರಿಮೂಡಿಸುತ್ತಿತ್ತು. ಅದರ ಒಳಹೊಕ್ಕರೆ ಎಲ್ಲಿಂದ ಹೊರಬರಬೇಕು ಎಂದು ತಿಳಿಯಲು ತಡಕಾಡುವಂತೆ ಅದನ್ನು ನಿರ್ಮಿಸಲಾಗಿತ್ತು.ಒಳ ಹೋದಂತೆಲ್ಲಾ, ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಯಾ ಹೊಕ್ಕ ದಾರಿ ಯಾವ ದಿಕ್ಕಿಗಿತ್ತು ಎಂದು ಗೊಂದಲವುಂಟುಮಾಡುತ್ತಿತ್ತು. ಅಂಗಳದ ಬಲಬದಿಯಲ್ಲೊಂದು ಮಂಟಪ.
ಅದರ ಕಂಬಗಳಿಗೆ ಬಡಿದಾಗ ಬೇರೆ-ಬೇರೆ ಬಗೆಯ ಶಬ್ಧಗಳನ್ನು ಉಂಟುಮಾಡುತ್ತಿತ್ತು. ಅಲ್ಲಿದ್ದ ಪುಸ್ತಕದಲ್ಲಿ ನಮ್ಮ ಮಾಹಿತಿ ಬರೆದು ಅವಳ ಮನೆಯತ್ತ ಪ್ರಯಾಣಿಸಿದೆವು. ನಂತರ ಕಾರು ನಿಂತದ್ದು ಅವಳ ಮನೆಯ ಅಂಗಳದಲ್ಲಲ್ಲ, ಬದಲಾಗಿ ಒಂದು ಇಳಿಜಾರಿನಲ್ಲಿ! ಕೊಂಚ ದೂರದಲ್ಲಿ ನೀರಿನ ಶಬ್ಧ ಕೇಳುತ್ತಿತ್ತು. ಇದು ನಮ್ಮ ಪಟ್ಟಿಯಲ್ಲಿ ಇರಲಿಲ್ಲ. ಅವಳ ಜೊತೆ ಬಂದ ಪೋಷಕರು ನಮ್ಮನ್ನು ಅಲ್ಲಿಗೆ ಕರೆದೊಯ್ದರು. ಅದು 'ಚೆಲವರ ಜಲಪಾತ', ನನಗೆ ಎಲ್ಲೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಯಾ ಓದಿದ ನೆನಪು.
ಅದು ಅಪಯಕಾರಿಯಾಗಿದ್ದರಿಂದ ಅದರ ಹತ್ತಿರ ಹೋಗುವಂತಿರಲಿಲ್ಲ. ಅಲ್ಲಿ ಒಂದು ದೊಡ್ಡ ರಂಧ್ರವಿರುವುದೆಂದೂ. ಅಲ್ಲಿ ಈಜಲು ಹೋದ ಹಲವರು ಅದರೊಳಗೆ ಬಿದ್ದು ಸಿಕ್ಕಿ ಹಾಕಿಕೊಂಡು ಹೊರಬರಲಾಗದೆ ಅಸುನೀಗಿದ್ದರೆಂದು ಅವರು ತಿಳಿಸಿದರು. ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಕಾಫಿ ಕುಡಿದು ಮತ್ತೆ ಕಾರಿನ ಪ್ರಯಾಣ. ದಾರಿ ಮಧ್ಯೆ ಪೇಟೆಯಿಂದ ಅವಳ ಮನೆಗೆ ಏನನ್ನು ಖರೀದಿಸಿವುದೆಂದು ತೋಚದೆ ಐಸ್ ಕ್ರೀಮ್ ಕೊಂಡೆವು. ಅವಳ ಮನೆಯ ಇನ್ನೇನು ತಲುಪಲಿದೆ ಅನ್ನುವಷ್ಟರಲ್ಲಿ ಕಾರ್ ನಿಂತಿತು. ಒಂದು ಮನೆಯ ಅಂಗಳದಲ್ಲಿ ದೊಡ್ಡಜನರ ಗುಂಪು. ದಾರಿಯಲ್ಲೆಲ್ಲಾ ಜನರಿದ್ದರು, ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ಸಂಜೆಯ ಸಮಯ ಬೇರೆ. ನೀವಂದುಕೊಂಡಂತೆ ಇದು ಮರಣದ ದೃಶ್ಯವಲ್ಲ ಬದಲಾಗಿ ಕಾಳಿಂಗಸರ್ಪವೊಂದು ಮನೆಯೊಂದರ ಹೂವಿನಕುಂಡಗಳ ಎಡೆಯಲ್ಲಿ ಅಡಗಿ ಕುಳಿತಿತ್ತು. ಬೆಟ್ಟಹತ್ತಲು ಬಂದವರಿಗೆ ಬೋನಸ್ ಸಿಕ್ಕಂತಾಯಿತು. "Life is full of surprises and miracles" ಎಂಬ ಮಾತು ನಿಜವೆನಿಸಿತು. ಬದುಕಿನಲ್ಲಿ ನಮಗೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿದಲ್ಲಿ ನಮ್ಮ ಬದುಕು ಸುಂದರವಾಗುವುದು. ಆದರೆ ನಕಾರಾತ್ಮಕ ಮನಸ್ಸು ಇಂತಹ ಅವಕಾಶಗಳನ್ನು ಕಳೆದುಕೊಂಡು ನಂತರ ಪರಿತಪಿಸಲ್ಪಡುವುದು. ನಮ್ಮ ಬದುಕಿನ ಬಯಕೆಗಳಿಗೆ ಪ್ರಯತ್ನಿಸದೆ ನಂತರ ಪರಿತಪಿಸುವುದರಿಂದ ಪ್ರಯತ್ನಿಸಿ ಗಾಯಗೊಳ್ಳುವುದೇ ಲೇಸು . ಯಾಕೆಂದರೆ ಗಾಯ ಯಾವಾಗಲೂ ಗುಣವಾಗುವ ತನಕ, ಆದರೆ ಪಶ್ಚಾತಾಪ ಮರಣದ ತನಕ. ಕಾಳಿಂಗ ಸರ್ಪ ಹಿಡಿಯುವುದನ್ನು ಕಾಣುವ ಬಿಟ್ಟಿ ಭಾಗ್ಯ ನಮಗೆ! ನಾವಲ್ಲಿಂದ ಜನರನ್ನು ಚದುರಿಸಿ ಮುಂದಕ್ಕೆ ಚಲಿಸುತ್ತಿದ್ದರೆ ನಮಗೆ ಅದನ್ನು ನೋಡುವ ಭಾಗ್ಯವಿರುತ್ತಿರಲಿಲ್ಲ. ಮತ್ತೆ ಅದನ್ನು ಗೋಣಿ ಚೀಲದಲ್ಲಿ ತುಂಬಿಸಿದ ನಂತರವೆ ನಾವಲ್ಲಿಂದ ಹೊರಟದ್ದು!
ಅವಳ ಮನೆ ತಲುಪಿ ಕಾಫಿ ಕುಡಿಯುತ್ತಾ ಮನೆಯ ಸುತ್ತಮುತ್ತಲಿನ ಪರಿಸರ ವೀಕ್ಷಿಸಿದೆವು. ಅವರು ಹೊಸದಾಗಿ ಮಾಡಿದ ಅಡಿಕೆ ತೋಟಕ್ಕೂ ನಮ್ಮನ್ನು ಕರೆದೊಯ್ದಳು. ಅವರಿಗೆ ಅಡಿಕೆ ಕೃಷಿ ಹೊಸದಾಗಿದ್ದರಿಂದ ಅವಳ ತಂದೆ ನಮ್ಮಲ್ಲಿ ಉತ್ತಮ ಅಡಿಕೆಯ ತಳಿಗಳ ಬಗ್ಗೆ ಮಾಹಿತಿ ಕೇಳಿದರು. ಒಂದು ಯಾವುದೇ ಸಸ್ಯ ಯಾ ಪ್ರಾಣಿಯ ತಳಿಯ ಇಳುವರಿ ಆ ಪ್ರದೇಶದ ಹವಾಮಾನವನ್ನು ಆದರಿಸಿರುತ್ತದೆ. ಆದರೆ ನಮ್ಮ ಪ್ರದೇಶಕ್ಕೂ ಅಲ್ಲಿನ ಹವಾಮಾನಕ್ಕೂ ಅಜಗಜಾಂತರ ವ್ಯತ್ಯಾಸವಿರುವುದರಿಂದ ನಾನು ಸಲಹೆ ನೀಡಲು ನಿರಾಕರಿಸಿದೆ. ನಂತರ ಎಲ್ಲರೂ ಒಟ್ಟಾಗಿ ಕುಳಿತು ಕೋಳಿ ಸಾರಿನ ಜೊತೆ ಅಕ್ಕಿ-ರೊಟ್ಟಿ ಸವಿದೆವು. ಮತ್ತೆ ಹಿಂದಿರುಗುವಾಗ ಅವಳ ತಾಯಿ ಎಲ್ಲರಿಗೂ ಒಂದಿಷ್ಟು ಅವರೆ ಕಾಳನ್ನು ಬಿತ್ತನೆಮಾಡಲೆಂದು ಕೊಟ್ಟರು. ಅವರು ಅದರ ಬಗ್ಗೆ ಹೇಳುವಾಗ ನಾನೆ ನಿಲ್ಲಿಸಿ ಅದು ನಮ್ಮಲ್ಲಿ ಬೆಳೆಯುವುದೆಂದೂ, ಇನ್ನೊಮ್ಮೆ ಬರುವಾಗ ಅದೇ ಬೀಜಗಳಿಂದ ಬೆಳೆದ ಅವರೆಯನ್ನು ತರುವೆನೆಂದು ಬೀಗಿದೆ. ವಿಪರ್ಯಾಸವೆಂದರೆ ಎಲ್ಲರ ಮನೆಯಲ್ಲಿ ಅದು ಬಳ್ಳಿಯಾದರೆ ನಾನು ಬಿತ್ತಿದ ಬೀಜಗಳು ಮೊಳಕೆಯೇ ಒಡೆಯಲಿಲ್ಲ. ಅವರಿಗೆ ನಾನಂದ ಮಾತು ಈಗಲೂ ನೆನಪಿರಬಹುದಾ? ಇನ್ನೊಮ್ಮೆ ಎದುರಿಗೆ ಸಿಕ್ಕಿ ಕೇಳಿದರೆ ಏನೆಂದು ಹೇಳುವುದು ಎನ್ನುವುದು ನನ್ನ ಆತಂಕ!
ತನ್ನ ಮನೆಯ ಅಂಗಳದಿಂದ, ಬಾಲ್ಯದಿಂದಲೇ
ಕಾಣುತ್ತಿದ್ದ ತನ್ನ ಕನಸಿನ ಬೆಟ್ಟಕ್ಕೆ ನಮ್ಮೊಡಗೂಡಿ
ಹೆಜ್ಜೆಹಾಕಿದ,
ಮನೆಗೆ ಕರೆದು ಆತಿಥ್ಯ ನೀಡಿದ,
ನಕ್ಷತ್ರಗಳೆಡೆಗೆ ಯಾತ್ರಿಸಲು ಬಯಸುವ, ಶಿಖರ-ಜಲಪಾತ-ಕಾಡು-ಸೂರ್ಯಾಸ್ತದ ದಾರಿಯಲ್ಲಿ ಹೆಜ್ಜೆಯಿಡಲು ಹಂಬಲಿಸುವ ಅವಳು,
ಮದುವೆಯ ನಂತರ ರೆಕ್ಕೆ ಕತ್ತರಿಸಿಕೊಂಡು, ತಮ್ಮ ವಿನೋದದ ಮತ್ತು ಕನಸಿನ ಬದುಕಿಗೆ ಎಳ್ಳು-ನೀರು ಬಿಡುವ ಮಹಿಳೆಯರ ನಡುವೆ, ನಮ್ಮೊಡನೆ ಹೆಜ್ಜೆಹಾಕಲು ಅನುಮತಿಸುವ ಯಾ ನಮ್ಮೊಡಗೂಡಿ ಇನ್ನಷ್ಟು ಬೆಟ್ಟಗಳ ತುದಿಯಲ್ಲಿ ಮೋಡಗಳೆಡೆಗೆ ಕೂಗಿಹೇಳುವ ಉತ್ಸಾಹಿ ಸಂಗಾತಿಯನ್ನು ಅವಳು ಸಂಧಿಸಲಿ ಎಂಬುವುದು ನಮ್ಮ ಆಶಯ.
Adventurists:
Napanda Neelam Kuttappa(ಅವಳು)
Napanda Akshatha Kuttappa
Rakshith Panja
Prasad Gowda Kalanja
Avinash Yadav
Shravan Alva
Kaushik Gowda M
Ashith Rai T(author)
































Comments
Post a Comment